ಮಾರ್ಲ್‍ಬರೋ, ಡ್ಯೂಕ್
 	1650 - 1722. ಇಂಗ್ಲೆಂಡಿನ ಪ್ರಸಿದ್ಧ ಸೇನಾನಿ. ಜಾನ್ ಚರ್ಚಿಲ್, ಫಸ್ಟ್ ಡ್ಯೂಕ್ ಆಫ್ ಮಾರ್ಲ್‍ಬರೋ ಈತನ ಪೂರ್ಣನಾಮ. 1650 ನೇ ಮೇ 26 ರಂದು ಜನನ. ಎರಡನೆಯ ಜೇಮ್ಸ್ ದೊರೆ ಈತನನ್ನು ಸೇನಾಪತಿಯಾಗಿ ನೇಮಿಸಿದ. 1688ರಲ್ಲಿ ಮಾರ್ಲ್ ಬರೋ ತನ್ನ ಆಪ್ತ ಸಲಹಾ ಮಂಡಳಿಯ ಸದಸ್ಯನಾದ. ತನ್ನ ಶಕ್ತಿ ಸಾಮಥ್ರ್ಯಗಳಿಂದ ಕೀರ್ತಿಗಳಿಸಿ 1690ರಲ್ಲಿ ಇಂಗ್ಲಿಷ್ ಸೈನ್ಯಗಳಿಗೆಲ್ಲ ಮುಖ್ಯ ಸೇನಾಪತಿಯಾಗಿ ನೇಮಿಸಲ್ಪಟ್ಟ. 1689-91ರ ನಡುವಿನ ಫ್ಲಾಂಡರ್ಸ್ ಮತ್ತು ಐರ್ಲೆಂಡಿನ ಕದನಗಳಲ್ಲಿ ಜಯಗಳಿಸಿದ. ಆದರೆ ಎರಡನೆಯ ಜೇಮ್ಸ್‍ನನ್ನು ಸಿಂಹಾಸನಕ್ಕೆ ತರಲು ಪಿತೂರಿ ನಡೆಸಿದನೆನ್ನುವ ಆಪಾದನೆ ಮೇಲೆ ಈತನನ್ನು ಉದ್ಯೋಗದಿಂದ 1691ರಲ್ಲಿ ತೆಗೆದುಹಾಕಿ 1692ರಲ್ಲಿ ಟವರ್ ಆಫ್ ಲಂಡನ್ನಿನಲ್ಲಿ ಸೆರೆ ಇಡಲಾಯಿತು. 1701ರಲ್ಲಿ ದೊರೆ ವಿಲಿಯಮ್ ಫ್ರಾನ್ಸಿನ ವಿರುದ್ಧ ಹೋರಾಡಲು ಇವನನ್ನು ಮತ್ತೆ ಸೇನಾಪತಿಯಾಗಿ ನೇಮಿಸಿದ.

ಬ್ಲೆನ್ ಹೀಮ್ (1704), ರಮಲೀಸ್ (1706) ಮತ್ತು ಸ್ಯೂಡಿನಾರ್ಡೆ (1708) ಈ ಯುದ್ಧಗಳಲ್ಲಿ ಈತ ಜಯಗಳಿಸಿ ಪ್ರಸಿದ್ಧನಾದ. ವಿಲಿಯಮ್‍ನ ಅಂತರ ರಾಣಿ ಅನ್ನೆ (1702) ಪಟ್ಟಕ್ಕೆ ಬಂದಳು. ಇವಳ ಕಾಲದಲ್ಲಿ ಮಾರ್ಲ್‍ಬರೋ ಇನ್ನಷ್ಟು ಪ್ರಸಿದ್ಧನೂ ಪ್ರಬಲನೂ ಆದ. ಇವನ ಪತ್ನಿ ಸರ್ರಾ ಜೆನ್ನಿಂಗ್ಸ್ ರಾಣಿಯ ಆಪ್ತಳಾಗಿದ್ದಳು. ಮಾರ್ಲ್‍ಬರೋವಿನ ಉನ್ನತಿಗೆ ಇವನ ಹೆಂಡತಿಯ ಪ್ರಭಾವವೂ ಕಾರಣವೆನ್ನುತ್ತಾರೆ. ಅದರೆ ರಾಣಿ ಅಬ್ಬೆ 1711ರಲ್ಲಿ ಇವನನ್ನು ಪದಚ್ಯುತನನ್ನಾಗಿ ಮಾಡಿದಳು. ಮುಂದೆ ಒಂದನೆಯ ಜಾರ್ಜ್ ದೊರೆ ಸಿಂಹಾಸನಕ್ಕೆ ಬಂದಾಗ ಮಾರ್ಲ್‍ಬರೋ ಮತ್ತೆ ಅಧಿಕಾರಕ್ಕೆ ಬಂದ.
ಮಾರ್ಲ್‍ಬರೋ 1722ರಲ್ಲಿ ತೀರಿಕೊಂಡಾಗ ವೆಸ್ಟ್‍ಮಿನ್‍ಸ್ಟರ್ ಸಬೆಯಲ್ಲಿ ಸಮಾಧಿಮಾಡಿ ಗೌರವ ತೋರಿಸಲಾಯಿತು.										
	(ಬಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ